ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದ ಅಜೇಯ : ಕೆರೆಮನೆ ಮಹಾಬಲ ಹೆಗಡೆ

ಲೇಖಕರು :
ನಾರಾಯಣ ಯಾಜಿ
ಭಾನುವಾರ, ಫೆಬ್ರವರಿ 17 , 2013

ಧರಣೀ ಮಂಡಲ ಧರೆಗೆ ಬಂದುದೋ ಯೆಂಬತೆರನಂತೆ |
ಕುರುಕುಲಾನ್ವಯ ದೀಪ ಗಂಗಾ | ತರಳ ಸ್ಯಂದನದಿಂದಲೈತರೆ ||


ಕೆರೆಮನೆ ಮಹಾಬಲ ಹೆಗಡೆಯವರನ್ನು ‘ಭೀಷ್ಮ ವಿಜಯ’ದ ಈ ಪದ್ಯದ ಮೂಲಕವೇ ಪರಿಚಯಿಸುವುದು ಸಮರ್ಪಕ. ವಿಕ್ರಮವೇ ಫಣ ಎಂಬ ಸ್ವಯಂವರದಲ್ಲಿ ಧುಃತ್ರೆಂದು ಭೀಷ್ಮ ಪ್ರತ್ಯಕ್ಷವಾಗಿ,

"ಸುತ್ತ ನೋಡುತ ಗಂಗಾ ತರಳನು..."

ರಂಗದ ಮಧ್ಯದಲ್ಲಿ ದೃಷ್ಟಿ ಹಾಯಿಸುತ್ತಾ ಒಮ್ಮೆಲೇ ಕಂಚಿನ ಕಂಠ ತರೆದು “ಅರರೆ ಕಾಶೀಸನು ಗರ್ವದಿ..."


ಕೆರೆಮನೆ ಮಹಾಬಲ ಹೆಗಡೆ
ಹಾಡಿದ ತಕ್ಷಣ ಮುಂದೆಲ್ಲಾ ಇಡೀ ರಂಗದಲ್ಲಿ ಭೀಷ್ಮ ಆವರಿಸಿಕೊಳ್ಳುತ್ತಾನೆ. ಪರಿಸ್ಥಿತಿಯ ಕೈಗೊಂಬೆಯಾದ ಅಂಬೆಯ ಅಸಹಾಯಸ್ಥಿತಿ ಭೀಷ್ಮನ ವ್ಯಕ್ತಿತ್ವವನ್ನು ಕಿಂಚಿತ್ತು ಅಲುಗಾಡಿಸುವುದಿಲ್ಲ. ಸ್ವತಃ ಭೀಷ್ಮನೇ ಈ ಸಂದರ್ಭಕ್ಕೆ ಕಾರಣವಾದ ಅಂಶವನ್ನು ನೆನೆಯುತ್ತಾ ‘ಕಾಲಾಯ ತಸ್ಮ ನಮಃ’ ಎಂದು ದೀರ್ಘ ನಿಟ್ಟುಸಿರು ಬಿಡುತ್ತಾ ಒಳಸಾಗಿದರೆ ಪ್ರೇಕ್ಷಕರು ಕೆಲ ನಿಮಿಷಗಳ ಕಾಲ ಚಿತ್ರಪಟಗಳಂತೆ ತಮ್ಮ ತಮ್ಮ ಖುರ್ಚಿಗಳಲ್ಲೇ ಕುಳಿತಿರುತ್ತಾರೆ. ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಹೇಳುವ ‘ಪ್ರಯೋಗಂ ಪ್ರೇಕ್ಷಕಾನ್ ಅಭಿನಯತಿ ಇತಿ ಅಭಿನಯಃ’ (ಪ್ರಯೋಗವನ್ನು ಪ್ರೇಕ್ಷಕರಿಗೆ ಮುಟ್ಟಿಸುವುದು) ಸಾಕ್ಷಾತ್ಕಾರವಾಗುವದು ಇಂತಹ ಸಂದರ್ಭಗಳಲ್ಲಿ.

ಮಹಾಬಲರ ಕೇವಲ ಭೀಷ್ಮ ಮಾತ್ರವಲ್ಲ ಅವರು ನಿರ್ವಹಿಸಿ ಹೆಸರು ಪಡೆದ ದೇವವೃತ ಭೀಷ್ಮ, ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವ ಇಲ್ಲೆಲ್ಲಾ ಪ್ರೇಕ್ಷಕ ಈ ಮೇಲಿನ ಅನುಭವವನ್ನು ಹೊಂದಿದ್ದಾನೆ. ನಾಟ್ಯಶಾಸ್ತ್ರದಲ್ಲಿ ಬರುವ ಸಾತ್ವತೀ ಮತ್ತು ಆರಭಟೀ ವೃತ್ತಿಗೆ ಮಾದರಿಯಾಗಬಲ್ಲ ಪಾತ್ರವನ್ನು ಕಕ್ಷಾದಲ್ಲಿ (ಭರತನ ನಾಟ್ಯಶಾಸ್ತ್ರ ಅಧ್ಯಾಯ ೧೩) ಕಟ್ಟಿದವರು ಅವರು. ಅವರ ಪ್ರತಿಯೊಂದು ಪಾತ್ರದ ಕುರಿತು ಭರತನ ನಾಟ್ಯಶಾಸ್ತ್ರವನ್ನು ತೌಲನಿಕ ಮಾಡುವುದು ಏಕೆಂದರೆ ಅವರೇ ಒಂದು ಕಡೆ ಹೇಳಿಕೊಂಡಂತೆ, ಬಾಲ್ಯದಲ್ಲಿ ದಿ| ಮೂಡ್ಕಣಿ ನಾರಾಯಣ ಹೆಗಡೆಯವರ ಹತ್ತಿರವಿದ್ದ ಹಸ್ತಾಭೀತಿಯದ ವಿವರವುಳ್ಳ ಪುಸ್ತಕದ ಕೆಲವು ಹಾಳೆಗಳನ್ನು ಹರಿದಿರಿಸಿಕೊಂಡಿದ್ದರಂತೆ. ಅವರ ಜನ್ಮಜಾತ ಸ್ವಭಾವ, ಯಾವುದನ್ನಾದರೂ ಅದನ್ನೆ ಶಿಸ್ತುಬದ್ಧವನ್ನಾಗಿ ಸ್ವೀಕರಿಸುವದು ಮತ್ತು ಅಳವಡಿಸಿಕೊಳ್ಳುವದು. ಇವರಿಗೆ ಶಾಸ್ತ್ರ ಅಂದರೆ ಕೇವಲ ಒಣಸರಕಲ್ಲ. ಕಬ್ಬಿನ ಜಿಲ್ಲೆಯೊಳಗಿನ ರಸ. ಪ್ರಯೋಗವೆಂಬುದು ವಿಕಸನವೇ ಹೊರತು ಪ್ರತ್ಯೇಕತೆಯಲ್ಲ. ಈ ಹಿನ್ನೆಲೆಯಲ್ಲಿ ಮಹಾಬಲ ಹೆಗಡೆಯವರು ತಾನು ರಂಗದಲ್ಲಿ ಅಭಿನಯಿಸಬೇಕಾಗಿ ಬಂದ ಪ್ರತೀ ಪಾತ್ರಕ್ಕೂ ಆಳವಾದ ಅಧ್ಯಯನ, ಹೋಂವರ್ಕ್, ಮಾಡಿಕೊಳ್ಳುತ್ತಾರೆ. ದೇವವೃತ ಭೀಷ್ಮನಾಗಿ ರೂಪಾಂತರ ಹೊಂದುವ ಘೋರ ಪ್ರತಿಜ್ಞೆ ಅದಕ್ಕೆ ಸಾಕ್ಷಿಯಾಗಿಸಿಕೊಳ್ಳುವ "೧ ಈ ಲೋಕದ, ೨ ಸೂರ್ಯ ಚಂದ್ರರ, ೩ ತ್ರಿಮೂರ್ತಿಗಳ, ೪ ಚತುರ್ವೇದಗಳ, ೫ ಪಂಚ ಮಹಾಭೂತಗಳ, ೬ ಷಟ್ ಶಾಸ್ತ್ರಗಳ, ೭ ಸಪ್ತರ್ಷಗಳ, ೮ ಅಷ್ಟವಸುಗಳ, ೯ ನವಗೃಹಗಳ, ೧೦ ದಶದಿಕ್ಕುಗಳ, ೧೧ ಏಕಾದರ ರುದ್ರರ, ೧೨ ದ್ವಾದಶಾಮಿತ್ರರ...." ಹೀಗೆ ತಾರಕಕ್ಕೇರುವಾಗ ಅಂತರಿಕ್ಷದಲ್ಲಿ ದೇವತೆಗಳು ಮತ್ತು ಬಂದಿದ್ದಾರೋ ಅನಿಸದಿರದು. ಇಂತಹ ತೀವೃತೆಯನ್ನು ರಂಗದಲ್ಲಿ ಕೂಡಬಲ್ಲ ಮತ್ತೋರ್ವ ಕಲಾವಿದ ಭಾರತೀಯ ರಂಗಕಲೆಗಳಲ್ಲೇ ಮತ್ತೊಬ್ಬರಿಲ್ಲ. ಖ್ಯಾತ ವಿದ್ವಾಂಸ ದಿ| ಕು.ಶಿ. ಹರಿದಾಶಭಟ್ಟರು ಉದಯವಾಣಿಯ ತಮ್ಮ ‘ಲೋಕಾಭಿರಾಮ’ದಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ, ಆ ಕಾಲದಲ್ಲಿ ಇಡೀ ದೇಶವನ್ನೇ ಅಷ್ಟು ಹೊತ್ತು ವಿಸ್ಮಿತವನ್ನಾಗಿಸಿದ ಮಹಾಭಾರತ ಸರಣಿಯ ಬಗೆಗೆ ಬರೆಯುತ್ತಾ, ಭೀಷ್ಮನ ಪಾತ್ರಧಾರಿಯ ಮುಕೇಶ್ ಖನ್ನಾನ ಕುರಿತು ಹೊಗಳುವಾಗ ಮಹಾಬಲ ಹೆಗಡೆಯವರ ಭೀಷ್ಮನನ್ನು ಹೊರುತುಪಡಿಸಿ ಎಂದು ವಿವರಿಸಿದ್ದಾರೆ.

ಭೀಷ್ಮನ ಪಾತ್ರದಲ್ಲಿ ಕೆರೆಮನೆ ಮಹಾಬಲ ಹೆಗಡೆ
ಬೆರಗಾಗುವುದು ಇಲ್ಲೇ. ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿ ಹುಡುಗ ಅಪ್ಪಟ ತುಂಟ, ಪುಂಡಾಟ, ಆಲೆಮನೆಗೆ ಹೋಗಿ ಕೊಪ್ಪರಿಗೆಯಲ್ಲಿ ಉಚ್ಚೆಹೋಯ್ಯುವ ಈತ, ಮಳೆಗಾಲದಲ್ಲಿ ಗುಡ್ಡೆಯಿಂದ ಹರಿವ ನೀರಿನಂತೆ ಎಲ್ಲ ಕಡೆಯೂ ದಾಂಧಲೆ. ಆದರೆ ಚಿಕ್ಕಪ್ಪ ಶಿವರಾಮ ಹೆಗ್ಗಡೆಯ ಮೂಲಕ ಒಂದು ಸಣ್ಣ ಅವಳೆ (ಕಾಲುವೆ) ರೂಪುಗೊಂಡದ್ದೇ ತಡ, ಸ್ವ ಪ್ರಯತ್ನದ ಮೂಲಕ ಶರದಿ ಗಂಭೀರರಾದವರು. ನಾಲ್ಕನೆಯ ತರಗತಿಯವರೆಗೆ ಓದಿದರೂ ಮತ್ತೆ ಸ್ವಾಧ್ಯಾಧ್ಯಯನದ ಮೂಲಕ ಕನ್ನಡ ಸಾಹಿತ್ಯವನ್ನು ಮನನಿಸಿಕೊಂಡವರು. ಓದಿದ್ದು ಅರಿತಾಗ, ತಿಳಿವು ಜ್ಞಾನವಾದಾಗ, ಬಾಹ್ಯಚಕ್ಷು ಅಂತಃ ಚಕ್ಷುವಿನೊಡನೆ ಬೆರೆತಾಗ ಆಡುವ ಮಾತು ಅರ್ಥವಾಗುತ್ತದೆ. ಕಾವ್ಯ ಶ್ರಾವ್ಯವಾಗಿ, ರಸ ದೈವಿ ಸಿದ್ಧಿ, ಮಾನುಷ ಸಿದ್ಧಿಯನ್ನು ಪಡೆಯುತ್ತದೆ. ಹಾಗಾಗಿಯೇ ಮಹಾಬಲ ಹೆಗಡೆಯವರ ಪಾತ್ರಗಳು ಶಾಸ್ತ್ರದ ಆಧಾರದಿಂದ ಸೃಜನಶೀಲವಾಗಿ ದರ್ಪೋದ್ಧತೆ ಎನ್ನುವ ಹೊಸ ನಾಯಕತ್ವದ ಆಯಾಮಕ್ಕೆ ಕಾರಣವಾಯಿತು.

ಕಲಾವಿದನ ಅಭಿನಯ ಎಂದರೆ ಊಸರವಳ್ಳಿಯಲ್ಲ. ಅದು ಲೋಕಧರ್ಮಿ, ನಾಟ್ಯ ಧರ್ಮಿ ಎರಡರ ಪಾಕಗಳು. ಈ ನಿಟ್ಟಿನಲ್ಲಿ ಇವರ ಸುಧನ್ವ , ಭೀಷ್ಮ, ರಾವಣ, ಕೌರವ ಮುಂತಾದ ಪಾತ್ರಗಳು ಭೂಮಿಯಿಂದ ಮೇಲೆಸೆದ ಚಂಡಿನಂತೆ ಕರ್ತಾರನ ನಿಯಾಮಕ ಶಕ್ತಿಯ ಅಲೆಗಳಲ್ಲೊಂದು ಎನ್ನುವಂತೆ ವಿರೋಧಿಸಿ ಐಕ್ಯವಾಗುತ್ತವೆ. ಇವೆಲ್ಲ ದೈವೀ ಸಿದ್ಧಿಯ ರೂಪಕಗಳು. ಇಲ್ಲಿ ಹೆಗಡೆಯವರ ಅಭಿನಯ ನಾಟ್ಯಧರ್ಮವನ್ನು ಅತಿಕ್ರಮಿಸುವುದಿಲ್ಲ. ಅವರ ಅರ್ಥದಲ್ಲಿ ಶಬ್ದಗಳ ಅಪವ್ಯಯವಿಲ್ಲ. ಉದಾ. ಅಂಬೆಯ ಅನೇಕ ಅಕ್ಷೇಪಗಳಿಗೆ ಇವರ ಉತ್ತರ "ಮೊದಲು ನಿನಗೆ ತಲೆ ಸರಿ ಇಲ್ಲ." ಸಂಧಾನದಲ್ಲಿ ಕೃಷ್ಣನನ್ನು ಕುರಿತು "ಪಾಪಿಹೋದಲ್ಲಿ ಮೊಣಕಾಲು ನೀರು." ಅಂತೆಯೇ ಕೃಷ್ಣ ಸಮುದ್ರಕ್ಕೆ ಹೋದರೂ ಸಮುದ್ರ ಹಿಂದೆ ಸರಿಯಿತು (ದ್ವಾರಕೆಯಾಯ್ತು) ಎಂಬ ಪರ್ಯಾಯೋಕ್ತೆ ಅಲಂಕಾರ ಮುಂತಾದವುಗಳು. ಇಲ್ಲೆಲ್ಲ ಅಂತಿಮವಾಗಿ ಹೆಗಡೆಯವರು ದೈವೀಸಿದ್ಧಿಯನ್ನು ನಾಟ್ಯಧರ್ಮಿಯಲ್ಲಿ ಮಿಳಿತಗೊಳಿಸುತ್ತಾರೆ.

ತರುಣ ಕೆರೆಮನೆ ಮಹಾಬಲ ಹೆಗಡೆ
ಅದೇ ರೀತಿ ಇವರ ಸುಭದ್ರಾ ಕಲ್ಯಾಣದ ಬಲರಾಮ, ಚಂದ್ರಹಾಸದ ದುಷ್ಟಬುದ್ಧಿ ಲೋಕ ಧರ್ಮಕ್ಕೆ ಉದಾಹರಣೆಗಳು. ಅರಸ ಸುಬುದ್ಧಿ, ಮಂತ್ರಿ ದುಷ್ಟಬುದ್ಧಿ, ಪ್ರಜೆಗಳೆಲ್ಲ ಮಂದ ಬುದ್ಧಿ (ದುಷ್ಟ ಬುದ್ಧಿಯಾಗಿ) ಅರ್ಜುನನ್ನು ಸನ್ಯಾಸಿಯೆಂದು ಭ್ರಮಿಸಿದ ಬಲರಾಮ ರಂಗದಲ್ಲಿ ಆರತಿ ಬೆಳಗಿ ತೆಂಗಿನಕಾಯಿ ಒಡೆಯುವರು. ಇನ್ನಾರೇ ಅದನ್ನು ಅನುಕರಿಸುವಾಗ ಪೇಲವವಾಗುವ, ಕಲೆಯಿಂದ ಜಾರುವ ಅಪಾಯವಿರುವಾಗ ಮಹಾಬಲ ಹೆಗಡೆಯವರು ಪ್ರೇಕ್ಷಕರನ್ನು ಮಾನುಷ ಸಿದ್ಧಿಗೆ ಒಯ್ಯುತ್ತಾರೆ. ಭಾಷೆಯನ್ನು ಇವರಂತೆ ದುಡಿಸಿಕೊಂಡವರು ಕ್ವಚಿತ್ತಾಗಿ ಸಿಗಬಹುದು. ಇದಕ್ಕೆ ಕಾರಣ ಅವರು ಪ್ರತೀ ಕಥೆಯ ಭಾವವನು ಅರಿತುಕೊಂಡಿದ್ದು (ಪಾತ್ರದ್ದಲ್ಲ) ಭಾವ ಎನ್ನುವದು ಮಾತು - ಚಲನವಲನ - ಸತ್ವ ಇವುಗಳಿಂದ ಕೂಡಿದ ಕಾವ್ಯದ ಅರ್ಥವನ್ನು ತಿಳಿಸುತ್ತದೆ. ವೀರ, ರೌದ್ರ, ಅದ್ಭುತ ರಸಗಳ ಇವರ ಪಾತ್ರ ಜನ ಮಾನಸವನ್ನು ತಲುಪಲು ಕಾರಣವಾದದ್ದು. ಇವರು ಬಳಸುತ್ತಿದ್ದ ಲಘು ಅಕ್ಷರಗಳು. ಉಪಮಾ - ರೂಪಕ ಅಲಂಕಾರಗಳಿಂದಾಗಿ ಇವರ ಭಾಷೆ (ಶೈಲಿ) ಆರ್ಯಭಾಷೆ (ಅತಿಭಾಷಾ, ಆರ್ಯಭಾಷಾ, ಜಾತಿ ಭಾಷಾ, ಜಾತ್ಯಂತರಿ, ಭಾಷಾ ಅಧ್ಯಾಯ ೧೪-೧೭ ಬ.ನಾ.ಶಾ) ಇವು ಇವರ ವಿಪುಲವಾದ ಸಾಹಿತ್ಯದ ಅಧ್ಯಯನದಿಂದ ಅರಿವು ಪಡೆದು ಸಂಸ್ಕಾರಗೊಂಡ ಭಾಷೆ. ಅದಕ್ಕೆ ಇವರು ಉಚ್ಚರಿಸುವಾಗಿನ ಷಡ್ಜ ಋಷಭ ಸ್ವರವೂ ಕಾರಣ.

ಮಹಾಬಲ ಹೆಗಡೆಯವರಿಗೆ ಇವೆಲ್ಲ ನೇರವಾಗಿ ಸಿದ್ಧಿಸಿದ್ದಲ್ಲ. ಈ ಕಲಾವಿದನ ರಂಗ ಪಯಣದಲ್ಲಿ ಅನೇಕ ಪ್ರಯೋಗವನ್ನು ಮಾಡಿ ಯಕ್ಷಗಾನಕ್ಕೆ ಪೂರಕವಾದದ್ದನ್ನಷ್ಟೇ ಉಳಿಸಿಕೊಂಡವರು. ವಿಶ್ವಾಮಿತ್ರ ಮೇನಕೆಯಲ್ಲಿ ಅಭಿನಯಿಸುವಾಗ ಗಂಗಾಧರ ಶಾಸ್ತ್ರಿಯವರ "ಎಲ್ಲೆಲ್ಲೂ ಸೊಬಗಿದೆ, ಸುತ್ತೆಲ್ಲ ಸೊಗಸಿದೆ" ಎನ್ನುವ ಪದ್ಯವನ್ನು ಸುಮಾರು ೧೯೫೫ ರಲ್ಲಿ ಬಳಸಿಕೊಂಡದ್ದುಂಟು. ಆದರೆ ಅದು ಯಕ್ಷಗಾನಕ್ಕೆ ಹೊಂದುವುದಿಲ್ಲ ಎಂದು ತಿಳಿದಾಗ ಅಷ್ಟೇ ನಿರ್ದಾಕ್ಷಿಣ್ಯವಾಗಿ ಅದನ್ನು ಬೀಸಾಡಿದರು. ಇವೆಲ್ಲ ಅವರ ಮೇಲೆ ದಿವ್ಯತೆಯತ್ತ ಸಾಗುವಾಗಿನ ಪಥದ ಮುಳ್ಳುಗಳು.

ಮಹಾಬಲರನ್ನ ಯಕ್ಷಗಾನಕ್ಕೇ ಸೀಮಿತಗೊಳಿಸಿದರೆ ನಮ್ಮನ್ನೇ ನಾವು ವಂಚಿಸಿಕೊಂಡಂತೆ. ಸಂಗೀತ, ಸಾಹಿತ್ಯ, ನಾಟಕ, ಭಜನೆ ಹೀಗೆ ಎಲ್ಲದರಲ್ಲೂ ಇವರು ಮಹಾಬಲರೆ ! ಚಿತ್ರಾಪುರದ ಶ್ರೀಪಾದರಾಯರಿಂದ ಸಂಗೀತದ ಪ್ರಾರಂಬಿಕೆಯನ್ನು ಕಲಿತ ಇವರು ನಂತರ ಧಾರಾವಾಡದ ಶ್ರೀ ನಾರಾಯಣ ಮುಜಂದಾರರಿಂದ ಹೆಚ್ಚಿನ ಶಿಕ್ಷಣ ಪಡೆದರು. ಶಾಸ್ತ್ರೀಯ ಸಂಗೀತ ಒಂದು ಬದ್ಧತೆಯನ್ನು, ಶಿಸ್ತನ್ನು, ಕ್ರಮವನ್ನು, ಆಚಾರವನ್ನು ಬಯಸುವ ಒಂದು ಕಲೆ. ಯಕ್ಷಗಾನದ ಸ್ವರೂಪ ಸ್ವಚ್ಛಂದ. ಮಹಾಬಲರು ಶಾಸ್ತ್ರೀಯ ಸಂಗೀತವನ್ನು ಕಲಿತರೂ ಅಲ್ಲಿ ಅವರ ಹುಡುಕಾಟ ಯಕ್ಷಗಾನಗಳಲ್ಲಿನ ಶಾಸ್ತ್ರೀಯತೆಯನ್ನು ಹುಡುಕುವುದಾಗಿತ್ತು. ಮೊಟ್ಟ ಮೊದಲು ಬಾರಿಗೆ ಬಡಗಿನ ಚೆಂಡೆಗೆ ಶೃತಿಯನ್ನು ಅಳವಡಿಸಿದ್ದು ಅವರು. ಹಾಗಾಗಿ ತಮ್ಮ ಕಲಾ ಬದುಕಿನಲ್ಲಿ ಇವರು ಯಕ್ಷಗಾನದ ಶಾಸ್ತ್ರೀಯ ಅಂಶವನ್ನೆ ಹುಡುಕಿ ಅದು ಹೀಗೆ ಇದು ಹೀಗೆಲ್ಲ ಎಂದು ಬೊಬ್ಬೆ ಹೊಡೆದವರು. ಯಕ್ಷಗಾನದ್ದೇ ಆದ ಪ್ರತ್ಯೇಕ ಸುಮಾರು ೧೫೦ ರಾಗಗಳ ಕುರಿತು ಇವರಿಗೆ ಮಾಹಿತಿ ಸಿಕ್ಕಿದ್ದು ಡಾ| ಶಿವರಾಮ ಕಾರಂತರಿಂದ. ಆದರೆ ಇವರ ಅಧ್ಯಯನ ಅಕಾಡೆಮಿಕ್ ಆಗಿಲ್ಲವಾದದ್ದರಿಂದ ಅದಕ್ಕೆ ಮಾನ್ಯತೆ ಬರಲಿಲ್ಲ. ಆದರೆ ಇವರ ಸಲಹೆ, ಪಡೆದೋ ಪಡಯದೆಯೋ ಇತರರು ಯಕ್ಷಗಾನ ಶಾಸ್ತ್ರೀಯತೆಯನ್ನೆ ಪ್ರತಿಪಾದಿಸಿದಾಗೆಲ್ಲ ಇವರು ಕರುಬಲಿಲ್ಲ. ಬದಲಾಗಿ ತಾನು ಗುರುತಿಸಿದ್ದು ನಿಜ ಆಯಿತಲ್ಲ ಎಂದು ಮಗುವಿನಂತೆ ಕಂಡ ಕಂಡವರಿಗೆ ಮಾತನಾಡುತ್ತಲೋ, ಫೋನಾಯಿಸಿಯೋ ಹೇಳುತ್ತಾರೆ. ಡಾ| ಕಬ್ಬನಾಲೆ ವಸಂತ ಭಾರದ್ವಾಜರ ಯಕ್ಷಗಾನದ ಛಂದಸ್ಸು. ಡಾ| ಶೀಮಂತೂರು ನಾರಾಯಣ ಶೆಟ್ಟಿ ಮುಂತಾದವರ ಸಂಶೋಧನೆ ಯಕ್ಷಗಾನದ ಶಾಸ್ತ್ರೀಯತೆಗೆ ಸಾಕ್ಷಿಯಾದಾಗ ಮಹಾಬಲ ಹೆಗಡೆಯವರಿಗೆ ಹರ್ಷವೋ ಹರ್ಷ. ಆದರೆ ದಿನನಿತ್ಯದ ಗೋಳಿಗೆ ಪರದಾಡುವ ಕಲಾವಿದ, ಬಂಡವಾಳ ಹಾಕಿ ಆದಾಯ ನಿರೀಕ್ಷಿಸುವ ಯಜಮಾನರಿಂದ ಯಕ್ಷಗಾನದ ನಿರೂಪಣೆಯಾದಾಗ, ಬೇಸತ್ತ ಇವರು ತಮ್ಮ ಮಕ್ಕಳನ್ನು ಯಕ್ಷಗಾನಕ್ಕಿಂತ ಸಂಗೀತಕ್ಕೆ ಹೋಗಲೂ ಪ್ರೇರೇಪಿಸಿದರು. ಇದು ಕಾನ್ವೆಂಟಿನ ಶಿಸ್ತಿನಲ್ಲಿ ಬೆಳೆದ ವಿದ್ಯಾರ್ಥಿ ಸರಕಾರೀ ಶಾಲೆಗೆ ಬಂದಾಗಿನ ಅವ್ಯವಸ್ಥೆಗೆ ಹೆದರಿ ಮತ್ತೆ ಶಿಸ್ತಿನ ಶಿಕ್ಷಣಕ್ಕಾಗಿ ಹಂಬಲಿಸುವಂತೆ.
ಶ್ರೀ ಚಿಟ್ಟಾಣಿ ರಾಮಚ೦ದ್ರ ಹೆಗಡೆಯವರೊ೦ದಿಗೆ ಕೆರೆಮನೆ ಮಹಾಬಲ ಹೆಗಡೆ


ವ್ಯಂಗ್ಯ ಮಹಾಬಲರದ್ದೇ ವೈಶಿಷ್ಟ್ಯ. ಇದು ಅವರ ನಾಟಕ ರಂಗದ ಫಲ. ಇವರ ಗಂಭೀರ, ವೀರ ಭಾವಗಳಂತೆ ಕರುಣಾರಸ ಅಷ್ಟೊಂದು ಪ್ರಸಿದ್ಧಿಯಲ್ಲ. ಕಾರಣ ಇವರ ವ್ಯಕ್ತಿತ್ವವೂ ಇರಬಹುದು. ಇವರ ಜೀವನ ಚರಿತ್ರೆಯಲ್ಲಿ ಬರುವಂತೆ ಬಾಲ್ಯದ ಕಾಲದಲ್ಲಿ ಒಮ್ಮೆ ಎಲ್ಲೂ ಊಟಕ್ಕೆ ಅಕ್ಕಿ ಸಿಗದಾದಾಗ ಸುಮಾರು ಒಂದು ತಿಂಗಳು ಹಾಲು ಕುಡಿದೇ ಇದ್ದರಂತೆ. ಹೊರತೂ ಯಾರದೋ ಮನೆಬಾಗಿಲಿಗೆ ಪಾರಾನ್ನಕ್ಕೋ, ಊಟಕ್ಕೋ ಹೋಗಲಿಲ್ಲ. ನಾನು ಚಿಕ್ಕವನಿದ್ದಾಗಿನ ಒಂದು ಘಟನೆ ಆಗ ನಮ್ಮೂರಲ್ಲಿ ನನ್ನ ದೊಡ್ಡಪ್ಪ ಸಾಲೇಬೈಲ ವಿಷ್ಣು ಯಾಜಿ. ಪಂಚಾಯತ್ ಅಧ್ಯಕ್ಷರು. ಆ ಕಾಲಕ್ಕೆ ಭಾರೀ ಹೆಸರು ಗಳಿಸಿದ ವೈದಿಕರು ಮತ್ತೆ ಮಾತುಗಾರ. ಮಹಾಬಲ ಹೆಗಡೆಯವರ ಮನೆಯಲ್ಲಿ ಅವರ ಅತ್ತೆ ಅವರೊಟ್ಟಿಗೆ ಇದ್ದಿದ್ದರು. ಅವರಿಗೆ ಬೇರೆ ಯಾರೂ ಇಲ್ಲ. ಅದಾಗ ವಿಧವಾ ವೇತನ ಯೋಜನೆ ಮಾತ್ರ ಜಾರಿಗೆ ಬಂದಿತ್ತು. ತಿಂಗಳಿಗೆ ಮೂವತ್ತು ರೂಪಾಯಿ. ಯಾಜಿಗಳು ಮಹಾಬಲ ಹೆಗಡೆಯವರಿಗೆ ಅನುಕೂಲವಾಗಲೆಂದು ಶ್ಯಾನುಭೋಗರನ್ನ ಉಗ್ರಾಣಿಯನ್ನು ಹೆಗಡೆಯವರ ಮನೆಗೆ ಅವರ ಅತ್ತೆಯ ಸಹಿ ಮಾಡಿ ಅರ್ಜಿ ತರಲು ಕಳುಹಿಸಿದರು. ಮಹಾಬಲರಿಗೂ ಸುಖದ ಕಾಲವೇನಲ್ಲ. ಅರ್ಜಿ ತುಂಬಿಸಿ ಇನ್ನೇನು ಸಹಿ ಹಾಕಿಸಬೇಕು. ಎಲ್ಲೋ ಹೋಗಿದ್ದ ಹೆಗಡೆಯವರು ಬಂದರು. ವಿಷಯ ತಿಳಿದು ಕೆಂಡಾ ಮಂಡಲವಾದರು. ಅಳಿಯ ತಾನಿರಬೇಕಾದರೆ ಸರಕಾರದ ಭಿಕ್ಷೆ ಯಾಕೆಂದು ಶ್ಯಾನುಭೋಗರಿಗೆ ರೇಗಾಡಿದ್ದೇ. ಇಬ್ಬರೂ ನಡುಗುತ್ತಾ ಓಡಿ ಬಂದಿದ್ದರು. "ವಿನಾ ಧೈನ್ಯೇನ ಜೀವನಂ |" ಬದುಕಿನುದ್ದಕ್ಕೂ ಕಾಪಿಟ್ಟುಕೊಂಡು ಬಂದವರು ಅವರು. ಹಾಗಾಗಿ ಮಹಾಬಲರೂ ರಂಗದ ಮೇಲೂ ರಂಗದ ಹೊರಗೂ ದೈನೇಸಿ ಖಂಡಿತಾ ಆಗಲಾರರು.

ವಿಶಿಷ್ಟವಾದ ಚೌತಾಳರ ಕುಣಿತ ಅದು ಮಹಾಬಲ ಹೆಗಡೆಯವರದ್ದೇ. ಕೈಯಿಂದ ಚಪ್ಪಾಳೆ ತಟ್ಟಿ ಕುಂಡೆಯನ್ನ ೬೦೦ ಕೋನದಲ್ಲಿ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರಿಗಿಸುತ್ತಾ ಹಾರುವ ಚಂದವೇ ಚಂದ. ಚಂದ್ರಾವಳೀ ವಿಲಾಸದ ಇವರ ಕೃಷ್ಣ ಪೋಲಿಯಲ್ಲ. ಅದು ಕೃಷ್ಣನ ಲೀಲೆಯ ಮತ್ತೊಂದು ಪ್ರಕರಣ. ಇವರ ಕೀಚಕ ವಿಪ್ರಲಭ ಶೃಂಗಾರಕ್ಕೊಂದು ಉದಾಹರಣೆ.

ವಯಕ್ತಿಕವಾಗಿ ಅನೇಕ ಆಘಾತಗಳನ್ನು ಅನುಭವಿಸಿರುವ ಮಹಾಬಲರು ಗೊಬ್ಬರ ಹೀರಿದ ಮರ ಹಣ್ಣು ನೀಡಿದಂತೆ ಕಲೆಯ ರಸ ಉಣಿಸಿದ್ದಾರೆ. ಇಂದೂ ಕೂಡಾ ಯಕ್ಷಗಾನದ / ಸಂಗೀತದ ವಿಷಯ ಬಂದಾಗ ಚುರುಕು ಮತಿಯಾಗುತ್ತಾರೆ. ಅವರ ಬದುಕು ಚರಿತ್ರೆಯಲ್ಲಿ ಓದಲೇಬೇಕಾದ ಪುಟ.

ಕೃಪೆ : http://www.kendasampige.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ